ಅಭಿವ್ಯಕ್ತಿವಾದ	
 
 	
ಈ ಹೆಸರು ಪಡೆದಿರುವ ವಿಮರ್ಶೆಯ ತತ್ತ್ವ (ಎಕ್ಸ್‍ಪ್ರೆಷನಿಸಂ) ಆಧುನಿಕ ಸೌಂದರ್ಯ ಮೀಮಾಂಸೆಯಲ್ಲಿ ಗಣ್ಯಸ್ಥಾನವನ್ನು ಗಳಿಸಿರುವ ವಾದಗಳಲ್ಲೊಂದು. ಕಲೆ ಕೇವಲ ಬಾಹ್ಯ ಪ್ರಕೃತಿಯ ಅನುಕರಣೆಯಲ್ಲ, ಕಲೆಗಾರನ ಆಂತರಿಕ ಅನುಭವಗಳನ್ನು ವ್ಯಕ್ತಪಡಿಸುವುದೇ ಅದರ ಗುರಿ ಎಂಬ ಅಭಿಪ್ರಾಯವೇ ಈ ವಾದದ ಆಧಾರ. ಅಗೋಚರವಾದ ಭಾವಗಳಿಗೂ ಮನೋವೃತ್ತಿಗಳಿಗೂ ಅದು ಪ್ರಾಧಾನ್ಯ ನೀಡುತ್ತದೆ. ನಮಗಿರುವ ಪ್ರಪಂಚ ಪರಿಚಯ ಕೇವಲ ಕಣ್ಣು, ಕಿವಿಗಳಿಂದ ಬಂದುದಲ್ಲ; ಅದನ್ನು ಅರಿತುಕೊಳ್ಳುವದರಲ್ಲಿ ನಮ್ಮ ಅಂತರ್ದೃಷ್ಟಿ ಮುಖ್ಯ ಪಾತ್ರವಹಿಸುತ್ತದೆ; ಅಂತರ್ದೃಷ್ಟಿಯ ಪ್ರಾಮಾಣಿಕವಾದ ಅಭಿವ್ಯಕ್ತಿಯೇ ಕಲೆಯ ಕರ್ತವ್ಯ ಎಂಬುದು ಅಭಿವ್ಯಕ್ತಿವಾದಿಗಳ ಮತ. ಕಲೆಗಾರನ ಗಮನಕ್ಕೆ ಬರುವ ವಸ್ತುಗಳು ಅವನ ಮನಸ್ಸಿನ ಮೇಲೆ ತೀಕ್ಷ್ಣವೂ, ಸ್ಪಷ್ಟವೂ ಆದ ಪರಿಣಾಮವನ್ನು ಉಂಟುಮಾಡುತ್ತವೆ. ಕಲೆಗಾರ ಹೀಗೆ ಪಡೆವ ಮಾನಸಿಕ ಅನುಭವವೇ ಕಲೆಯ ಮೊದಲ ಹಂತ; ಅದನ್ನು ಬಣ್ಣಗಳ, ಶಿಲಾಕೃತಿಗಳ, ಪದಗಳ ಮೂಲಕ ಇತರರಿಗೆ ಅರಿವಾಗುವಂತೆ ಪ್ರಚುರಪಡಿಸುವುದು (ಅಭಿವ್ಯಕ್ತಿಪಡಿಸುವುದು) ಎರಡನೆಯ ಮಜಲು. ಯಾರ ಅಂತರ್ದೃಷ್ಟಿ ತೀಕ್ಷ್ಣವೂ, ಸ್ಪಷ್ಟವೂ ಆಗಿರುತ್ತದೋ ಅವನ ಅಭಿವ್ಯಕ್ತಿಯೂ ಪರಿಣಾಮಕಾರಿಯಾಗಿರುತ್ತದೆ. ಕಲೆಗಾರ ತನ್ನ ಮನಸ್ಸಿನಲ್ಲಿರುವುದನ್ನು ಮುಚ್ಚು ಮರೆಯಿಲ್ಲದೆ ವ್ಯಕ್ತಪಡಿಸಬೇಕು. ಅದಕ್ಕಾಗಿ ಅವನು ಅಗತ್ಯವಿದ್ದರೆ ಇಂದ್ರಿಯ ಗೋಚರವಾಗುವ ವಸ್ತುಗಳ ರೂಪರೇಷೆಗಳನ್ನು ಬದಲಾಯಿಸಬಹುದು.

	
ಅಭಿವ್ಯಕ್ತಿವಾದ ಮೊದಲು ಪ್ರಚಾರಕ್ಕೆ ಬಂದುದು ಚಿತ್ರಕಲೆಯಲ್ಲಿ; ಅನಂತರ ಶಿಲ್ಪಕಲೆ, ಸಾಹಿತ್ಯ ಮೊದಲಾದ ಇತರ ಕ್ಷೇತ್ರಗಳಿಗೂ ಹಬ್ಬಿತು. ಅದನ್ನು ಮೊದಲು ಅಧಿಕಾರಪೂರ್ವಕವಾಗಿ ಎತ್ತಿಹಿಡಿದ ಸೌಂದರ್ಯ ಮೀಮಾಂಸಕ ಇಟಲಿಯ ಬೆನೆಡಿಟೊ ಕ್ರೋಚೆ. 				(ನೋಡಿ- ಕ್ರೋಚೆ,-ಬೆನೆಡೆಟೋ)					 (ಎಂ.ಆರ್.)

ಅಭಿವ್ಯಕ್ತಿವಾದ ಎನ್ನುವುದು ಮೊದಲು ಬಳಕೆಯಾದದ್ದು 1911 ಏಪ್ರಿಲ್‍ನಲ್ಲಿ ಜರ್ಮನ್ ಚಿತ್ರಕಲಾವಿದ ಅಗಸ್ಟ್ ಹರ್ವೆಯ ಚಿತ್ರಗಳ ವಿಮರ್ಶೆಯಲ್ಲಿ ಬಳಕೆಯಾಯಿತು; ಸಾಹಿತ್ಯಕ್ಕೆ ಇದು ಅನ್ವಯವಾದದ್ದು 1911 ರ ಜುಲೈನಲ್ಲಿ. ಈ ಪದವು ಬಹುಬೇಗ ವಿಸ್ತಾರವಾಗಿ ಬಳಕೆಯಾದರೂ ರಿಚರ್ಡ್ ಷೆಪರ್ಡ್ ಎನ್ನುವ ವಿಮರ್ಶಕನು ಈ ಪಂಥವನ್ನು ಕುರಿತು ಹೀಗೆನ್ನುತ್ತಾನೆ. “ಪ್ರಾರಂಭದಲ್ಲಿ ಅಭಿವ್ಯಕ್ತಿ ಪಂಥದ ಹಲವರು ಈ ಪದವನ್ನು ಬಳಸದಯೇ ಸತ್ತರು. ಇತರ ಪ್ರಮುಖ ಬರಹಗಾರರು ಅದನ್ನು ಒಪ್ಪಲಿಲ್ಲ. ಈ ಪಂಥಕ್ಕೆ ಸೇರಿದ್ದವರಲ್ಲಿ ಇತರರು ಅದನ್ನು ನಿರಾಕರಿಸುತ್ತ್ತಾರೆ. ಇಲ್ಲವೇ ಅದರೊಡನೆ ಸಂಬಂದ ಇಟ್ಟುಕೊಳ್ಳುವುದಕ್ಕೆ ಬಯಸುವುದಿಲ್ಲ.”

ಕಲಾಕೃತಿಯ ಉದ್ದೇಶ ಕಲಾವಿದನ ವ್ಯಕ್ತಿತ್ವದ ಅಭಿವ್ಯಕ್ತಿಯಲ್ಲದೆ ವಸ್ತುವಿನ ಯಥಾವತ್ತಾದ ನಿರೂಪಣೆಯಲ್ಲಿ ಎನ್ನುವುದು ಈ ಪಂಥದ ನಿಲುವು. ಇದು ರೋಮ್ಯಾಂಟಿಸಿಸಂ ಅನ್ನು ವಾಸ್ತವತಾವಾದವನ್ನು ನಿರಾಕರಿಸಿತು. ಅಭಿವ್ಯಕ್ತಿವಾದ ಕೃತಿಗಳ ಆಶಯ ಮತ್ತು ತಂತ್ರ ಬದುಕುತ್ತ ಹೋದವು. ಮೊದಲನೆಯ ಮಹಾಯುದ್ಧವು ಮುಕ್ತಾಯವಾಗಿ ಈ ಕಲಾವಿದರು ನಿರೀಕ್ಷಿಸಿದ್ದ ಕ್ರಾಂತಿಯು ಆಗದೆ ಹೋದಾಗ ಈ ಸಂಘದ ಕಲಾವಿದರಲ್ಲಿ ತೀವ್ರ ನಿರಾಸೆ ಮೂಡಿತ್ತು. ಕೆಲವರು ಆತ್ಮಹತ್ಯೆಯನ್ನು ಮಾಡಿಕೊಂಡರು. ಇದರ ಸ್ಥಾನಕ್ಕೆ ದಾದಾವಾದ ಬಂದಿತು.
							
(ಪರಿಷ್ಕರಣೆ: ಎಲ್.ಎಸ್.ಶೇಷಗಿರಿರಾವ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ